ಮಂಜಪ್ಪ, ಕಡಿದಾಳ
	1910, ರಾಜಕೀಯ ಧುರೀಣ ಹಾಗೂ ಕಾದಂಬರಿಕಾರ. ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೊಗೊಳಿಗೆ ಗ್ರಾಮದಲ್ಲಿ ಜನನ. ಬಾಲ್ಯದಲ್ಲಿ ತುಂಬ ಕಷ್ಟಕಾರ್ಪಣ್ಯ ಅನುಭವಿಸಿದರು. ದನಕುರಿಗಳನ್ನು ಕಾಯುವುದು, ಗೊಬ್ಬರಗೋಡುಗಳನ್ನು ಹೊರುವುದು, ಗದ್ದೆ ಉಳುವುದು ಇವೇ ಮುಂತಾದವು ಬಾಲ್ಯದ ಕೃಷಿಕ ಜೀವನದ ಅನುಭವಗಳು. ನಿಸರ್ಗ ರಮಣೀಯ ಮಲೆನಾಡಿನ ಪರಿಸರ ಇವರ ಬಾಳಿನ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡಿತು. ಐಗಳ ಮಠದಲ್ಲಿ ಹರಡಿದ್ದ ಮರಳುರಾಶಿಯ ಮೇಲೆ ಅಕ್ಷರ ತಿದ್ದುವುದರಿಂದ ಇವರ ವಿದ್ಯಾಭ್ಯಾಸ ಆರಂಭವಾಯಿತು. ತೀರ್ಥಹಳ್ಳಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಇಂಟರ್‍ಮಿಡಿಯೇಟ್ ಪರೀಕ್ಷೆ ಪೂರೈಸಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು (1932), ಪುಣೆಯ ಲಾ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದು ಉತ್ತೀರ್ಣರಾದರು (1934).

	ಅಲ್ಲಿಂದ ಶಿವಮೊಗ್ಗೆಗೆ ಬಂದು ವಕೀಲ ವೃತ್ತಿ ಆರಂಭಿಸಿದರು (1935). ಅದೇ ವರ್ಷ ಅಖಿಲ ಭಾರತ ಸದಸ್ಯರಾದರು. ಇವರು ಪ್ರೌಢಶಾಲೆಯಲ್ಲಿದ್ದಾಗ ಶಿವಮೊಗ್ಗಕ್ಕೆ ಬಂದ ಗಾಂಧೀಜಿಯವರ ದರ್ಶನದಿಂದಲೂ ಅವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳಿಂದಲೂ ಪ್ರಭಾವಿತರಾಗಿ ಚಿಕ್ಕಂದಿನಲ್ಲೇ ಇವರಲ್ಲಿ ರಾಷ್ಟ್ರಭಕ್ತಿ ಮೂಡಿ ರಾಜಕೀಯ ರಂಗಕ್ಕೆ ದುಮುಕುವಂತೆ ಮಾಡಿತು. 1937ರಿಂದ ಸುಮಾರು ಮೂರು ವರ್ಷ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1942ರಲ್ಲಿ ಕ್ವಿಟ್ ಇಂಡಿಯಾ ರಾಷ್ರೀಯ ಚಳವಳಿಯಲ್ಲಿ ಭಾಗವಹಿಸಿ 9ತಿಂಗಳು ಸೆರೆಮನೆಯಲ್ಲಿದ್ದರು. ಮೈಸೂರಿನ ಜವಾಬ್ದಾರಿ ಸರ್ಕಾರ ಸ್ಥಾಪೆನೆಯ ಚಳವಳಿಯ ಸಂಬಂಧದಲ್ಲಿಯೂ ಕೆಲ ತಿಂಗಳು ಸೆರೆಮನೆವಾಸ ಅನುಭವಿಸಿದರು.

	1941-45ರ ಅವಧಿಯಲ್ಲಿ ಮೈಸೂರು ಪ್ರಜಾಪ್ರತಿನಿಧಿಸಭೆಯ ಕಾಂಗ್ರೆಸ್ ಸದಸ್ಯರಾಗಿಯೂ 1942-52ರ ಅವಧಿಯಲ್ಲಿ ಮೈಸೂರು ನ್ಯಾಯವಿಧಾಯಕ ಸಭೆ ಮತ್ತು ರಾಜ್ಯಾಂಗ ಸಭೆಗಳ ಕಾಂಗ್ರೆಸ್ ಸದಸ್ಯರಾಗಿಯೂ ಆಯ್ಕೆಯಾಗಿ ಜನಸೇವೆ ಮಾಡಿದ್ದಾರೆ. ಈ ಅವಧಿಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಮಂತ್ರಿಯಾಗಿಯೂ ಕೆಲವು ತಿಂಗಳುಗಳ ಕಾಲ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 1962ರಿಂದ ಬೆಂಗಳೂರಿನಲ್ಲಿ ನೆಲಸಿ ವಕೀಲಿ ವೃತ್ತಿ ಆರಂಭಿಸಿದ್ದಾರೆ. ಮಂಜಪ್ಪನವರದು ಖಾಸಗಿ ಹಾಗೂ ರಾಜಕೀಯ ಜೀವನದಲ್ಲಿ ನಿಷ್ಠಾವಂತ ಜೀವನ. ಒಳ್ಳೆಯ ವಿಚಾರವಂತರಾದ ಇವರು ಯೌವನದಲ್ಲಿ ನಾಸ್ತಿಕರಂತೆ ಕಂಡರೂ ವಯೋಧರ್ಮ ಹಾಗೂ ಜೀವನದ ಅನುಭವಿಗಳಿಂದ ಪೂರ್ಣ ಆಸ್ತಿಕರಾಗಿದ್ದಾರೆ.

	1962ರಿಂದ ಈಚೆಗೆ ಕಾದಂಬರಿಕಾರರಾಗಿಯೂ ಹೆಸರು ಗಳಿಸಿದ್ದಾರೆ. ಪಂಜರವಳ್ಳಿಯ ಪಂಜು (1963) ಎಂಬ ತಮ್ಮ ಕಾದಂಬರಿಯಲ್ಲಿ ಮಲೆನಾಡಿನ ನಿಸರ್ಗ ಸೌಂದರ್ಯವನ್ನೂ ಅಲ್ಲಿಯ ಜನಜೀವನವನ್ನೂ ಯಥಾವತ್ತಾಗಿ ಚಿತ್ರಿಸಿದ್ದಾರೆ. ಮೂರುತಲೆಮಾರಿನ ಕಥೆ ತಿಳಿಸುವ ಈ ಕಾದಂಬರಿಯಲ್ಲಿ ರಾಜಕಾರಣದಲ್ಲಿ ಗಾಂಧೀತತ್ತ್ವಗಳ ಅನುಷ್ಠಾನ ಅಗತ್ಯವೆಂದು ಹೇಳಿ ಕಾಂಗ್ರೆಸ್ಸಿನ ಧ್ಯೇಯೋದ್ದೇಶ ಸಾಧನೆಗಳನ್ನು ತಿಳಿಸಲಾಗಿದೆ. ಈ ಪುಸ್ತಕ ಇಂಗ್ಲೀಷ್ ಮತ್ತು ಮಲಯಾಳಮ್ ಭಾಷೆಗಳಿಗೆ ಭಾಷಾಂತರಗೊಂಡಿದೆ. ನಾಳೆಯ ನೆಳಲು (1966) ಇವರ ಇನ್ನೊಂದು ಕಾದಂಬರಿ. ಸಾರ್ವಜನಿಕ ಜೀವನದ ಶುದ್ಧೀಕರಣ ಈ ಕಾದಂಬರಿಯ ಮುಖ್ಯ ಉದ್ದೇಶ. ಕ್ರಾಂತಿಕೂಟ ಎಂಬ ಕಾದಂಬರಿಯನ್ನೂ ರಚಿಸಿದ್ದಾರೆ (1974).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ